ಉಳ್ಳೂರ್
	1877-1949. ಕುಮಾರನ್ ಆಶಾನ್, ವಳ್ಳತ್ತೋಳ್ ಕವಿಗಳಷ್ಟೇ ಶ್ರೇಷ್ಠರೂ ಅವರ ಸಮಕಾಲೀನರೂ ಆಗಿದ್ದ ಕವಿಗಳು ಉಳ್ಳೂರ್ ಎಸ್.ಪರಮೇಶ್ವರಯ್ಯ ಅವರು. ಮಲೆಯಾಳ ಸಾಹಿತ್ಯದಲ್ಲಿ ಇವರ ಸ್ಥಾನ ದೊಡ್ಡದು. 1897ರಲ್ಲಿ ಪದವೀಧರರಾಗಿ ಅಧ್ಯಾಪಕವೃತ್ತಿಯನ್ನು ಕೈಗೊಂಡು ಕೆಲಸದಲ್ಲಿದ್ದುಕೊಂಡೆ ಬಿ.ಎಲ್. ಮತ್ತು ಎಂ.ಎ. ಪದವಿಗಳನ್ನು ಪಡೆದುಕೊಂಡು ಸರ್ಕಾರದ ಅನೇಕ ಇಲಾಖೆಗಳಲ್ಲಿ ಕೆಲಸಮಾಡಿ ಕಡೆಯಲ್ಲಿ ಲ್ಯಾಂಡ್ ರೆವಿನ್ಯೂ ಇನ್ಸ್‍ಪೆಕ್ಟರಾಗಿ ನಿವೃತ್ತರಾದರು. ವಲಿಯ ಕೋಯಿತ್ತಂಬುರಾನ್ ಕವಿಯ ಪ್ರಮುಖ ಅನುಯಾಯಿಯಾಗಿದ್ದುಕೊಂಡು ಸಾಹಿತ್ಯದಲ್ಲಿ ಅಭಿಜಾತ ಸಂಪ್ರದಾಯನಿಷ್ಠರಾಗಿದ್ದವರಿವರು. ದ್ವಿತೀಯಾಕ್ಷರ ಪ್ರಾಸದ ವಾದವಿವಾದದಲ್ಲಿ ಅವರು ಬಲು ದಿಟ್ಟ ನಿಲವನ್ನು ತಾಳಿದರು. ಉಮಾಕೇರಳವೆಂಬ ಮಹಾಕಾವ್ಯ ಆ ನಿಲುವಿನ ಫಲಶ್ರುತಿ, ಕಾಲಕ್ರಮದಲ್ಲಿ ಅವರ ಕಾವ್ಯ ಅನೇಕ ಪರಿವರ್ತನೆಗಳಿಗೆ ವಿಧೇಯವಾಯಿತು. ಇವರು ಕಾವ್ಯ ರಚನೆಗೆ ಪ್ರಾರಂಭ ಮಾಡಿದಾಗ ಕುಮಾರನ್ ಆಶಾನ್, ವಳ್ಳತ್ತೋಳ್ ಮೊದಲಾದ ಉತ್ಕøಷ್ಟ ಕವಿಗಳು ತಮ್ಮ ಗಾನಸುಧೆಯಿಂದ ಮಲೆಯಾಳಿಗಳನ್ನು ತಣಿಸಿದ್ದರು. ಒಂದು ಕಾಲದಲ್ಲಿ ತಾವು ಅನುಪೇಕ್ಷಣೀಯವೆಂದು ಭಾವಿಸಿದ್ದ ದ್ವಿತೀಯಾಕ್ಷರ ಪ್ರಾಸ ಜನಾಭಿರುಚಿಯನ್ನನುಸರಿಸಿ ಅಗಣ್ಯವಾಗುತ್ತದೆಂಬುದನ್ನು ಕಂಡೊಡನೆಯೇ ಉಳ್ಳೂರ್ ಅದನ್ನು ತ್ಯಜಿಸಿದರು. ವಳ್ಳತ್ತೋಳ್ ಕವಿ ದ್ರಾವಿಡ ವೃತ್ತಗಳಲ್ಲಿ ಕವಿತಾರಚನೆ ಮಾಡಿ ಕೇರಳೀಯರ ಪ್ರೀತಿ ಪಾತ್ರರಾಗಿರುವುದನ್ನು ಮನಗಂಡು ಅವರು ಆ ಬಗೆಯ ಕಾವ್ಯ ನಿರ್ಮಿತಿಯನ್ನೂ ಮಾಡಿದರು.

	ಉಮಾಕೇರಳದ ಬಳಿಕ ಇವರು ರಚಿಸಿದ ಕಾವ್ಯಗಳೆಲ್ಲ ಸಂಕಲಿತವಾಗಿ ಹೊರಬಂದಿವೆ. ಅರುಣೋದಯಂ, ತಾರಾಹಾರಂ, ಕಿರಣಾವಲಿ, ರತ್ನಮಾಲಾ, ಮಣಿಮಂಜೂಷ, ಹೃದಯ ಕೌಮುದಿ, ತರಂಗಿಣಿ, ಕಲ್ಪಶಾಖಿ, ಅಮೃತಧಾರ, ದೀಪಾವಲಿ, ಚಿತ್ರಶಾಲ, ತಪ್ತಹೃದಯ- ಎಂಬುವೇ ಆ ಸಂಕಲನಗಳು. ಇವಲ್ಲದೆ ಕರ್ಣಭೂಷಣಂ, ಪಿಂಗಳ, ಭಕ್ತಿದೀಪಿಕ ಮೊದಲಾದ ಖಂಡಕಾವ್ಯಗಳನ್ನು ಇವರು ರಚಿಸಿದ್ದಾರೆ. ಸುಜಾತೋದ್ವಾಹಂ ಚಂಪು, ಮಂಗಳಮಂಜರಿ, ವಂಜೀಶಗೀತ ಮುಂತಾದ ಹಳೆಯ ಬಗೆಯ ಕಾವ್ಯಗಳ ರಚನೆಯೂ ಅವರಿಂದ ನಡೆದಿದೆ. ತಾರಾಹಾರವೆಂಬ ಕವನ ಸಂಗ್ರಹದಲ್ಲಿ ಬರುವ ಮಣಿತ್ತುಳ್ಳಿ (ಮಳೆಹನಿ) ಎಂಬ ಕವನ ಉಳ್ಳೂರರ ಕಲಾವೈಭವಕ್ಕೆ ಪರಮ ಸಾಕ್ಷಿಯಾಗಿದೆ. ಆಕಾಶದಿಂದ ನೆಲಕ್ಕೆ ಬೀಳಲಿರುವ ಮಳೆಯ ಹನಿಯನ್ನು ಅನೇಕಾನೇಕ ಸೌಂದರ್ಯ ಪ್ರತೀಕಗಳೊಡನೆ ಉಳ್ಳೂರ್ ಉಪಮಿಸುತ್ತಾರೆ, ಉತ್ಪ್ರೇಕ್ಷಿಸುತ್ತಾರೆ. ವೀಣ ಪೂ (ಬಿದ್ದ ಹೂ) ಕವನದಲ್ಲಿ ಕುಮಾರನ್ ಆಶಾನ್ ಮಾಡಿರುವಂತೆ ಮಳೆಹನಿಯ ಮೂಲಕ ಮನುಷ್ಯ ಜೀವನವನ್ನು ಚಿತ್ರೀಕರಿಸಲು ಯತ್ನಿಸಿದ್ದಾರೆ.   		(ಕೆ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ